ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಚಿವರು -- ಬುದ್ದಿ ಕಲಿಯದ ಅಧಿಕಾರಿಗಳು

ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಚಿವರು -- ಬುದ್ದಿ ಕಲಿಯದ ಅಧಿಕಾರಿಗಳು

ಮಧುಗಿರಿ: ಮೂಲಭೂತ ಸಮಸ್ಯೆಗಳನ್ನು ಖುದ್ದು ಆಲಿಸಲು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿದ್ದು, ಜನರ ಸಮಸ್ಯೆಗಳನ್ನು ಆಲಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಪಟ್ಟಣದ ೧ ರಿಂದ ೮ ನೇ ವಾರ್ಡುಗಳಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿದ ಸಚಿವರಿಗೆ ಸಮಸ್ಯೆಗಳ ಸರಮಾಲೆ ಕಣ್ಣಿಗೆ ರಾಚಿತು. ೧ನೇ ವಾರ್ಡಿನ ಪಾವಗಡ ವೃತ್ತದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ರಸ್ತೆ ಗುಂಡಿಗಳನ್ನು ನೋಡಿ ಯುಜಿಡಿ ಅಧಿಕಾರಿಗಳಿಗೆ ರಸ್ತೆ ಸರಿ ಮಾಡುವಂತೆ ಸೂಚಿಸಿದರು. ಸಾರ್ವಜನಿಕರು ನಮಗೆ ಮನೆ ಹಾಗೂ ಉದ್ಯೋಗ ಕೊಡಿಸಲು, ಅಂಗಡಿಗೆ ಲೈಸೆನ್ಸ್, ವಿದ್ಯುತ್ ಸೌಲಭ್ಯ ಹಾಗೂ ನಲ್ಲಿ ಹಾಕಿಸಿಕೊಡಲು ಕೆಲವರು ಹಣ ಕೇಳುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು ಮತ್ತು ಹಲವೆಡೆ ಬೀದಿ ದೀಪಗಳು ಇಲ್ಲದ ಹಾಗೂ ರಸ್ತೆ ಗುಂಡಿಗಳ ಬಗ್ಗೆ ಜನರು ದೂರಿದರು. ಮುಖ್ಯಾಧಿಕಾರಿಗಳಿಗೆ ತಾಕಿತು. ಕುಡಿಯುವ ನೀರಿನ ಪೈಪ್‌ಗಳ ವಾಲ್‌ಗಳಲ್ಲಿ ನೀರು ನಿಂತಿದ್ದನ್ನು ಕಂಡ ಸಚಿವರು ಈ ನೀರಲ್ಲಿ ಕಲ್ಮಶ ಬೆರೆತು ಹರಿವ ನೀರು ನಿಂತಾಗ ಮತ್ತೆ ಪೈಪಿನೊಳಗೆ ಸೇರುತ್ತದೆ. ಮತ್ತೆ ನೀರು ಹರಿದಾಗ ಯಾರ ಮನೆ ಸೇರುತ್ತೋ ಗೊತ್ತಾಗಲ್ಲ. ಆಗಲೇ ಸಾಂಕ್ರಾಮಿಕ ರೋಗ ಹರಡುತ್ತೆ. ಈ ಬಗ್ಗೆ ಹಿಂದೆಯೇ ತಿಳಿಸಿದ್ದರೂ ವಾಲ್‌ಗಳಲ್ಲಿ ನೀರು ನಿಂತಿದೆ ಬೇಸರ ವ್ಯಕ್ತಪಡಿಸಿ, ಮತ್ತೆ ವಾಲ್‌ಗಳಲ್ಲಿ ನೀರು ನಿಂತರೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಯುಜಿಡಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್


ಪಟ್ಟಣದ ತುಂಬೆಲ್ಲ ಯುಜಿಡಿ ಕಾಮಗಾರಿ ೫ ವರ್ಷದಿಂದ ನಡೆಯುತ್ತಿದೆ. ಆದರೂ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಕೋಪಗೊಂಡ ಸಚಿವರು ಡ್ರೇನೇಜ್‌ಗಾಗಿ ತಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಪದೇ ಪದೇ ಗುಳಿಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಬೇಗ ಗುಣಮಟ್ಟದ ಕಾಮಗಾರಿ ನಡೆಸಿ ಕೆಲಸ ಪೂರ್ಣಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹಾಸ್ಟೆಲ್ ವ್ಯವಸ್ಥೆ ಕಂಡು ಸಚಿವರು ಕೆಂಡಮಂಡಲ ಪಟ್ಟಣದಲ್ಲಿರುವ ಸಾಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವ್ಯವಸ್ಥೆಯಲ್ಲಿ ಲೋಪಗಳು ಕಂಡು ಬಂದ ಹಿನ್ನಲೆಯಲ್ಲಿ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಮಗೆ ಸರಿಯಾಗಿ ಹಾಲು ಮತ್ತು ತಿಂಡಿ ನೀಡುತ್ತಿಲ್ಲ ಇದನ್ನು ಪ್ರಶ್ನಿಸಿದ್ದರೆ ನಮ್ಮನ್ನು ಥಳಿಸುತ್ತಿದ್ದಾರೆ ಎಂದು ದೂರು ಹೇಳಿದರು. ಇದನ್ನು ಕೇಳಿದ ಸಚಿವರು ಮಕ್ಕಳಿಗಾಗಿ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ನಾಳೆಯಿಂದ ದಿನಕ್ಕೆ ೪ ಲೀ. ಹಾಲು, ಮೊಸರು ಪಡೆದು ನೀಡಬೇಕು. ವಾರ್ಡನ್ ಜೊತೆಗೆ ತಾಲೂಕು ಅಧಿಕಾರಿಗಳು ಸಹಕಾರ ಮನೋಭಾವನೆಯಿಂದ ಹಾಸ್ಟೆಲ್ ವ್ಯವಸ್ಥೆ ಪರಿಶೀಲಿಸಬೇಕು. ಪ್ರತಿ ತಿಂಗಳು ಮಕ್ಕಳ ಆರೋಗ್ಯ ತಪಾಸಣೆಯಾಗಬೇಕು. ನಾನು ಅನಿರೀಕ್ಷಿತವಾಗಿ ಭೇಟಿ ನೀಡಲಿದ್ದು ತಪ್ಪಿದ್ದರೆ ಕ್ರಮ ನಿಶ್ಚಿತ ಎಂದ ಅವರು ದೂರು ಹೇಳಿದ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅಧಿಕಾರಿಗಳನ್ನು ಎತ್ತಂಗಡಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ಬುದ್ಧಿ ಕಲಿಯದ ಅಧಿಕಾರಿಗಳು - 


ಯುಜಿಡಿ ಅವರ ಕಳಪೆ ಕಾಮಗಾರಿಯಿಂದ ಪಟ್ಟಣದಲ್ಲಿನ ರಸ್ತೆಗಳಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಸಮಸ್ಯೆ ಎದುರಾಗಿದೆ. ಪಟ್ಟಣದಲ್ಲಿರುವ ಖಾಲಿ ನಿವೇಶನಗಳಲ್ಲಿ ಅನೇಕ ಗಿಡಗಳು ಬೆಳೆದು ಹುಳ-ಉಪ್ಪಟಗಳ ಕಾಟ ಹೆಚ್ಚಾಗಿದೆ, ಎಲ್ಲಾ ವಾರ್ಡ್ ಗಳಲ್ಲೂ ನಾಯಿಗಳ ಕಾಟ ಮಿತಿಮೀರಿದ್ದು, ಸಾರ್ವಜನಿಕರು ಭಯಭೀತಿಯಿಂದ ಓಡಾಡುತ್ತಿದ್ದಾರೆ. ಕೆಲವು ವಾರ್ಡ್ಗಳಲ್ಲಿ ಮಳೆ ನೀರು ನಿಂತ ಪರಿಣಾಮ ಹಾಗೂ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಷ್ಟೆಲ್ಲಾ ಆದರೂ ಸಂಬಂಧಪಟ್ಟ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವರ್ತಿಸುತ್ತಿರುವುದನ್ನು ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದು, ಖುದ್ದು ಸಚಿವರಾದ ಕೆ ಎನ್ ರಾಜಣ್ಣ ಅವರೇ ವಾರ್ಡ್ ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನಾದರೂ ಅಧಿಕಾರಿಗಳು ಬುದ್ಧಿ ಕಲಿಯುತ್ತಾರ ಎಂದು ಕಾದು ನೋಡಬೇಕಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್‌ತಾಜ್, ತಾ ಪಂ ಮುಖ್ಯಾಧಿಕಾರಿ ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಅಧಿಕಾರಿ ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಗೋವಿಂದರಾಜು, ಶ್ರೀಧರ್, ಮುಖಂಡರಾದ ನಂಜುಂಡರಾಜು, ಎಸ್ ಬಿ ಟಿ ರಾಮು, ಮಲ್ಲಿಕಾರ್ಜುನಯ್ಯ ಹಾಗೂ ಮುಂತಾದವರು ಇದ್ದರು.